ಕುಣಿಕೆ ಹುಳುಗಳು

ಇನ್ಸೆಕ್ಟ ವರ್ಗ, ಲೆಪಿಡಾಪ್ಟಿರ ಗಣದ ಜಿಯೋ ಮೆಟ್ರಿಡೀ ಮತ್ತು ನಾಕ್ಟುಯಿಡೀ ಕುಟುಂಬಗಳಿಗೆ ಸೇರಿದ ಕೀಟಗಳ ಡಿಂಬಗಳು. ಇವುಗಳ ವಿಶಿಷ್ಟ ಚಲನೆಯ ರೀತಿಯಿಂದಾಗಿ ಇವಕ್ಕೆ ಈ ಹೆಸರು ಬಂದಿದೆ. ಕೊಂಡಲಿ ಹುಳುಗಳು ಎಂದೂ ಹೆಸರಿದೆ. ಈ ಡಿಂಬಗಳು ಚಲಿಸುವಾಗ ತಮ್ಮ ಮೈಯನು ಕುಣಿಕೆಯಂತೆ ಕೊಂಕಿಸಿ ದೇಹದ ಹಿಂದಿನ ತುದಿಯನ್ನು ಮುಂದಿನ ತುದಿಯ ಹತ್ತಿರ ತಂದು ಊರಿ ಅನಂತರ ಮುಂತುದಿಯನ್ನು ಮುಂದಕ್ಕೆ ಚಾಚಿ ಸಾಗುತ್ತವೆ. ಈ ಚಲನೆ ಗೇಣುಹಾಕುವುದನ್ನು ಹೋಲುತ್ತದೆ. ಚಲನೆಯ ವೈಚಿತ್ರ್ಯಕ್ಕೆ ಕಾರಣ ಇವುಗಳಲ್ಲಿ ಸಾಮಾನ್ಯವಾಗಿ ಇರಬೇಕಾದ ಐದು ಜೊತೆ ಉಪಪಾದಗಳಲ್ಲಿ ಮುಂದಿನ ನಾಲ್ಕು ಜೊತೆಗಳು ಪೂರ್ತಿ ಅಥವಾ ಭಾಗಶಃ ಇಂಗಿಹೋಗಿರುವುದು. ಇದರಿಂದಾಗಿ ಹುಳು ಮೈಕೊಂಕಿಸದೆ ಚಲಿಸಲೆತ್ನಿಸಿದರೆ ದೇಹದ ನಡುಭಾಗ ಕೆಳಕ್ಕೆ ಜಗ್ಗುವ ಸಾಧ್ಯತೆ ಇದೆ. ಉದಾಹರಣೆ : ಟೀ ಗಿಡಕ್ಕೆ ಹತ್ತುವ ಬಿಸ್ಟನ್ ಸಪ್ರೆಸೇರಿಯ ಮತ್ತು ಅಗಸೆಗಿಡಕ್ಕೆ ಅಂಟುವ ಹೈಪೋಸಿಡ್ರ ಸಕ್ಸೆಸೇರಿಯ.

ನಾಕ್ಟುಯಿಡೀ ಕುಟುಂಬದ ಡಿಂಭಗಳನ್ನು ಅರೆಕುಣಿಕೆ ಹುಳುಗಳೆಂದು ಕರೆಯಲಾಗುತ್ತದೆ. ಇವುಗಳಲ್ಲಿ ದೇಹದ ಮುಂಭಾಗದ ಒಂದು, ಎರಡು ಅಥವಾ ಮೂರು ಜೊತೆ ಕಾಲುಗಳು ಕ್ಷೀಣವಾಗಿದ್ದು ಹಿಂಭಾಗದ ನಾಲ್ಕು ಜೊತೆ (ಅಪೂರ್ವವಾಗಿ ಎರಡು ಮತ್ತು ಮೂರು ಜೊತೆಗಳು) ಕಾಲುಗಳು ಇರುವುದರಿಂದ, ಇವು ಚಲಿಸುವಾಗ ದೇಹದ ನಡುಭಾಗ ಮಾತ್ರ ಕುಣಿಕೆಯಂತೆ ಬಾಗುತ್ತದೆ. ಉದಾಹರಣೆ: ಹರಳುಗಿಡದ ಪಿಡುಗಾದ ಎಕಿಯ ಜೇನೇಟ, ಪಡವಲಕಾಯಿಗೆ ಬೀಳುವ ಫೈಟೋಮೆಟ್ರ ಪೆಪೋನಿಸ್ ಮುಂತಾದವು.

            (ಡಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ